ಉಜ್ಜಯಿನಿಯ ಭೂಶೋಧನೆ: ಭಾರತೀಯ ಹಾಗೂ ಅನ್ಯದೇಶೀಯ ಗ್ರಂಥಗಳಲ್ಲಿಯೂ ಅಶೋಕನ ಶಿಲಾಶಾಸನದಲ್ಲಿಯೂ (ಮೈನರ್ ರಾಕ್ ಎಡಿಕ್ಟ್‌ 11) ಉಲ್ಲೇಖಿತವಾಗಿದ್ದು ಪ್ರಾಚೀನ ಶೂರ್ಪಾರಕ, ಶ್ರಾವಸ್ತಿ ಮತ್ತು ಭರುಕಚ್ಫಗಳ ವಾಣಿಜ್ಯಮಾರ್ಗಗಳ ಕೇಂದ್ರವಾಗಿದ್ದ ಗತ ಉಜ್ಜಯಿನಿ ಕ್ಷೇತ್ರದ ವೈಶ್ಯರ ಟೀಕ್ಡೀ, ಕುಮಾರ್ ಟೀಕ್ಡೀ, ಮತ್ತು ಘರ್ ಕಾಳಿಕಾ ಭಾಗಗಳಲ್ಲಿ ಹಿಂದಿನ ಗ್ವಾಲಿಯರ್ ಸಂಸ್ಥಾನದ ಪ್ರಾಚ್ಯವಸ್ತು ಸಂಶೋಧನ ಇಲಾಖೆಯವರು 1927, 1935, 1936 ಮತ್ತು 1939ರಲ್ಲಿ ನಡೆಸಿದ ಭೂಶೋಧನೆಯಿಂದ ಈ ಪ್ರದೇಶಗಳಲ್ಲಿ ಬೌದ್ಧ ಸ್ತೂಪಾವಶೇಷಗಳೂ ಅಸ್ಥಿಪಂಜರ, ಚಿತಾಭಸ್ಮಪಾತ್ರೆ ಮಣ್ಣಿನ ಪಾತ್ರೆ ಇವುಗಳನ್ನೊಳಗೊಂಡಿದ್ದ ಶ್ಮಶಾನ ಭೂಮಿಯೂ ಮೌರ್ಯರ ಕಾಲಕ್ಕೆ ಸೇರಿದ, ಹೊಳಪು ಕೊಟ್ಟ ಉತ್ಕೃಷ್ಟ ಶಿಲೆಗಳೇ ಮುಂತಾದ ಜನವಸತಿಯ ಕುರುಹುಗಳೂ ಕೋಟೆಯೂ ಕ್ರಮವಾಗಿ ದೊರೆತವು. ಈ ಮೂರು ಕಡೆಗಳಲ್ಲಿಯೂ ಪ್ರ.ಶ.ಪು. 2-3 ಶತಮಾನಗಳಲ್ಲಿ ಚಲಾವಣೆಯಲ್ಲಿದ್ದ, ರಂಧ್ರವಿರುವ ಮತ್ತು ಎರಕದ ನಾಣ್ಯಗಳೂ ಇದ್ದವು. 

ಇತ್ತೀಚೆಗೆ (1955-58) ಭಾರತೀಯ ಪುರಾತತ್ತ್ವ ಪರಿಶೀಲನ ತಂಡದವರು ಘರ್ ಕಾಳಿಕಾದಲ್ಲಿ ಕೂಲಂಕಷವಾಗಿ ಶೋಧಮಾಡಿ ಅಲ್ಲಿನ ಅವಶೇಷಗಳ ಅನುಕ್ರಮ ಸಾಂಸ್ಕೃತಿಕ ಪದರಗಳು ವಿಶಿಷ್ಟ ಲಕ್ಷಣಗಳ ಆಧಾರದ ಮೇಲೆ ಆದ್ಯಂತವಾಗಿ ಅಲ್ಲಿನ ಜನಜೀವನದ ನಾಲ್ಕು ಕಾಲಗಳನ್ನು ತಾತ್ಕಾಲಿಕವಾಗಿ ಗುರುತಿಸಿದ್ದಾರೆ. ಕೆಲವು ನೀಳ್ಗಲ್ಲು ಚಕ್ಕೆಗಳೂ ಗುಂಡುಗಳೂ ಕಪ್ಪು ಕೆಂಬಣ್ಣದ ಮಣ್ಣಿನ ಪಾತ್ರೆಯ ಚೂರುಗಳೂ ಕಂದಕಗಳೂ ಮರದ ತೊಲೆಗಳಿಂದ ಭದ್ರಪಡಿಸಿದ ಮಣ್ಣಿನ ಪ್ರಾಕಾರಗಳೂ ಇವನ್ನು ಕಟ್ಟಲು ಉಪಯೋಗಿಸಿದ್ದಿರಬಹುದಾದ ಬಿದಿರು ಬುಟ್ಟಿ, ಕಬ್ಬಿಣದ ಸಲಿಕೆ, ಬಣ್ಣ ಹಚ್ಚಿದ ಬೂದು ಮೃತ್ಪಾತ್ರೆಯ ಚೂರು, ಇವೂ ಈ ಮೊದಲನೆಯ ಕಾಲಕ್ಕೆ ಸಂಬಂಧಿಸಿದ ಪಳೆಯುಳಿಕೆಗಳು. ಮೆರಗು ಕೊಟ್ಟ ಕರಿಬಣ್ಣದ ಕಪ್ಪು ಮಡಕೆ, ಪ್ರ.ಶ.ಪು. ಸು. 3-2ನೆಯ ಶತಮಾನದ ಕಾಲದ ಬ್ರಾಹ್ಮೀಲಿಪಿಯಿರುವ ದಂತವಸ್ತು, ಆನೆಯ ಹಿಂಭಾಗದ ಆಕೃತಿಯಿರುವ ಕಲ್ಲುಕಂಬದ ಕಟ್ಟಡ, ಕಮ್ಮಾರನ ಕುಲುಮೆ, ಕಲ್ಲಿನ ಮಣಿ, ಕಸೂತಿ ಕಡ್ಡಿಯೇ ಮುಂತಾದವು ಇರುವ ಕೈಗಾರಿಕಾಮನೆ-ಇವು ಎರಡನೆಯ ಕಾಲಕ್ಕೆ ಸಂಬಂಧಿಸಿದಂತೆ ಕಂಡುಬಂದಿರುವುವು. ಮೂರನೆಯ ಕಾಲದಲ್ಲಿ ಇಲ್ಲಿ ಶ್ರೇಷ್ಠವಾದ ಕಲ್ಲುಮಣಿಗಳ ಕೈಗಾರಿಕೆ ಇತ್ತು. ಇವನ್ನು ಭರುಕಚ್ಛದ ಮೂಲಕ ಪಾಶ್ಚಾತ್ಯ ದೇಶಗಳಿಗೆ ಕಳಿಸಲಾಗುತ್ತಿತ್ತು ಎನ್ನುವುದಕ್ಕೆ ಆಧಾರವಾಗಿ ಇಲ್ಲಿ ಅಧಿಕ ಸಂಖ್ಯೆಯಲ್ಲಿ ಅಪೂರ್ಣ ಕಲ್ಲುಮಣಿಗಳೂ ಇವುಗಳನ್ನು ತಯಾರಿಸುವ ಸಾಧನಗಳಾದ ಕಲ್ಲುಪಡಿಗಳೂ ಕುಲುಮೆಗಳೂ ದೊರಕಿವೆ. ತಾಯಿ-ಮಗು ಹಾಗೂ ರೋಮನ್ ಚರ್ಕವರ್ತಿ ಆಗಸ್ಟಸ್ ಹೇಡ್ರಿಯನಸ್ ಚಿತ್ರದ ನಾಣ್ಯದ ಅಚ್ಚು, 2ನೆಯ ಶತಮಾನದ ಬ್ರಾಹ್ಮೀಲಿಪಿಯಿಂದಲೂ ಉಜ್ಜಯಿನಿಯ ಚಿಹ್ನೆಯಿಂದಲೂ ಕೂಡಿರುವ ದಂತ ವಸ್ತು-ಇವೂ ಈ ಕಾಲದ ಜನಜೀವನದ ಇಣುಕುನೋಟವನ್ನು ನಮಗೆ ದೊರಕಿಸಿಕೊಡುತ್ತವೆ. ನಾಲ್ಕನೆಯ ಕಾಲಕ್ಕೆ ಸಂಬಂಧಿಸಿದಂತೆ ನಸು ಬೂದುಬಣ್ಣದ ಮೆರುಗಿನ ಮಣ್ಣಿನಪಾತ್ರೆಗಳು ಹೇರಳವಾಗಿ ಲಭ್ಯವಾಗಿವೆ. ಈ ಎಲ್ಲ ಪಳೆಯುಳಿಕೆಗಳೂ ಉಜ್ಜಯಿನಿಯ ನಾಗರಿಕತೆಯ ವೈಶಿಷ್ಟ್ಯವನ್ನೂ ಬೆಳೆವಣಿಗೆಯನ್ನೂ ಅನ್ಯದೇಶಗಳೊಂದಿಗೆ ಅದು ಹೊಂದಿದ್ದ ಸಂಪರ್ಕದ ಸ್ವರೂಪವನ್ನೂ ತಿಳಿಯಲು ಸಹಾಯಕವಾಗಿವೆ. ಉಜ್ಜಯಿನಿ ಯಲ್ಲಿ ನೋಡಬೇಕಾದ ಅನೇಕ ಸ್ಥಳಗಳಿವೆ. ಇವುಗಳಲ್ಲಿ ಮುಖ್ಯವಾದವು- ಮಹಾಕಾಲೇಶ್ವರ, ಅದರ ಮೇಲಿನ ಅಂತಸ್ತಿನಲ್ಲಿರುವ ಓಂಕಾರೇಶ್ವರ, ಅದಕ್ಕೂ ಮೇಲಿರುವ ನಾಗ ಸಂಧ್ಯೇಶ್ವರ (ವರ್ಷಕ್ಕೊಮ್ಮೆ ಮಾತ್ರ), ಜೂನಾ ಮಹಾಕಾಲ, ಹರಸಿದ್ಧಿ ಮಾತಾ, ಬಡೇ ಗಣೇಶ್, ಶಿಪ್ರಾ ತಟ, ದತ್ತ ಅಖಾಡಾ, ಗೋಪಾಲ ಮಂದಿರ, ಗಢಕಾಳಿಕಾ, ಭರ್ತೃಹರಿ ಗುಹೆ, ಕಾಲಭೈರವ, ಸಿದ್ಧವಟ್, ಮಂಗಲನಾಥ್, ಚೌಬೀಸ್ಖಂಬಾ ದ್ವಾರ್, ಕಾಲಿಯಾದಹ್, ಅಂಕಪಾತ್ ಮತ್ತು ವೇದಶಾಲಾ. ಇಲ್ಲಿಯ ಕೆಲವು ಪ್ರಮುಖ ಸಾಂಸ್ಕೃತಿಕ/ವಿದ್ಯಾ ಸಂಸ್ಥೆಗಳಲ್ಲಿ ವಿಕ್ರಮ ವಿಶ್ವವಿದ್ಯಾಲಯ, ಸಿಂಧಿಯಾ ಓರಿಯಂಟಲ್ ರಿಸರ್ಚ್ ಇನ್ಸ್ಟಿಟ್ಯೂಟ್, ಕಾಳಿದಾಸ ಅಕಾಡಮಿ, ರಾಷ್ಟ್ರೀಯ ವೇದವಿದ್ಯಾ ಪ್ರತಿಷ್ಠಾನ, ಕಾವೇರೀ ಶೋಧ ಸಂಸ್ಥಾನ್ ಮುಂತಾದವನ್ನು ಹೆಸರಿಸಬಹುದು.	(ಎ.ಎಸ್.ಯು.)

ವರ್ಗ: ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ